ಬೇಟೆ – Bete

ಅಂತರಂಗ
ಬೇಟೆ-
ಮಾಂಸಾಹಾರಿ ಪ್ರಾಣಿಗಳು ತಮ್ಮ ಹೊಟ್ಟೆ ಹಸಿದಾಗ ಹೊಂಚು ಹಾಕಿ, ಬಲಿಪಶುವಿನ ಮೇಲೆರಗಿ ಕಚ್ಚಿ ತಿನ್ನುವ ಒಂದು ಅನಿವಾರ್ಯ ವಾಸ್ತವ.
ಬೇಟೆ-
ಬಿತ್ತಿ-ಬೆಳೆದು-ಬೇಯಿಸಿ ತಿನ್ನುವ ಜಾಣ್ಮೆ ಗೊತ್ತಿಲ್ಲದ ಶಿಲಾಯುಗದ ಮನುಷ್ಯನೂ ಕೂಡ ಕಲ್ಲು ಕಟ್ಟಿಗೆಗಳನ್ನು ಬಳಸಿ, ಸಿಕ್ಕ ಪ್ರಾಣಿಗಳನ್ನು ಹೊಡೆದು, ಹಸಿ ಹಸಿಯಾಗಿಯೇ ತಿನ್ನುತ್ತಿದ್ದ ಎನ್ನುವ ಒಂದು ಇತಿಹಾಸ.
ಬೇಟೆ-
ಅನಂತರದ ಪುರಾಣೇತಿಹಾಸಗಳ ಕಾಲದಲ್ಲಿ ರಾಜರುಗಳು ತಮ್ಮ ತಮ್ಮ ಪ್ರಜಾಹಿತಕ್ಕಾಗಿ – ಲೋಕಕಲ್ಯಾಣಕ್ಕಾಗಿ ದುಷ್ಟ ಮೃಗಗಳನ್ನು ಬೇಟೆಯಾಡಿ ಸಂಹರಿಸಲೇ ಬೇಕಾದ ಒಂದು ಪರಮ ಕರ್ತವ್ಯ. ಜೊತೆಗೆ “ಮೃಗಯಾ ವಿಹಾರ” ರಾಜರುಗಳ ವಿನೋದದ ಪ್ರಸ೦ಗವೂ ಹಾದು.
ಆದರೆ ಅಂದಿನಿಂದ ಇಂದಿನವರೆಗೂ ಮನುಷ್ಯ ಮನುಷ್ಯನನ್ನೇ ಬೇಟೆಯಾಡುವ ನಿಷ್ಕಾರಣ ಕ್ರೌರ್ಯ ಯಾಕಾಗಿ? ಮನುಷ್ಯ ಮನುಷ್ಯನನ್ನೆ ಹಿಂಸಿಸಿ ಆನಂದಿಸುವ ಪೈಶಾಚಿಕ ಪ್ರವೃತ್ತಿ ಯಾವ ಪುರುಷಾರ್ಥಕ್ಕಾಗಿ? ಅವನ ರಕ್ತದಲ್ಲೇ ಸೇರಿಹೋಗಿರುವ ಈ ನೀಚ ಗುಣ ತ್ಯಜಿಸದಿದ್ದರೆ ಮಾನವನ ಯಾವುದೇ ಸಾಧನೆಗೆ ಯಾವ ಅರ್ಥವಿದೆ?… ಇವು ಯಾವತ್ತಿನಿಂದಲೂ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು.
ಈ ಅಕಾರಣ ನರಬೇಟೆಯ ಉದಾಹರಣೆಯಾಗಿ ಶೌರ್ಯ, ಸಾಹಸಗಳ ಹೆಸರಿನಲ್ಲಿ ನಡೆವ ಯುದ್ಧವಿರಬಹುದು. ಇಂದಿನ ಜಗತ್ತನ್ನು ಭೀತಿಯ ತುದಿಗಾಲಲ್ಲಿ ನಿಲ್ಲಿಸಿದ, ಭಯೋತ್ಪಾದನೆಯಿರಬಹುದು. ಪ್ರಭುಗಳು ಪ್ರಜೆಗಳ ಬದುಕನ್ನೇ ಬೇಟೆಯಾಡುವ ಹಿಂಸಾವಿನೋದವಿರಬಹುದು. ಜಾತಿ-ವರ್ಗ-ವರ್ಣ-ಲಿಂಗಭೇದಗಳ ದರ್ಪ ದೌರ್ಜನ್ಯಗಳಿರಬಹುದು. ಪುರುಷರು, ಸ್ತ್ರೀಯರ ಮೇಲೆ ನಡೆಸುವ ಅಮಾನವೀಯ ಅತ್ಯಾಚಾರ- ಅಪವಾದ- ಅವಮಾನಗಳಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮನೆಯೆಂಬ ಸುರಕ್ಷಿತ ನೆಲೆಯಲ್ಲೂ ಹೆಂಗಸು, ಇಂದೂ ಸಹಿಸಬೇಕಾಗಿರುವ ತಣ್ಣಗಿನ ಕ್ರೌರ್ಯವಿರಬಹುದು. ಯಾಕಾಗಿ ಈ ಹಿಂಸೆ? ಯಾಕೆ ಈ ವಿಶಾಚ ಪ್ರವೃತ್ತೀ? ಇನ್ನೊಂದು ಜೀವಿಯ ಸಂಕಟದಿಂದಲೇ ನಮಗೆ ಯಾಕೆ ಸಂತೋಷವಾಗಬೇಕು?… ಇವು ಬಹುದಿನಗಳಿಂದ ನನ್ನನ್ನು ತಲ್ಲಣಗೊಳಿಸುತ್ತಿರುವ ಇನ್ನಷ್ಟು ಪ್ರಶ್ನೆಗಳು
ಜೊತೆಗೆ ಬಹುತೇಕ ಲೇಖಕಿಯರೆಲ್ಲ ಯಾಕೆ ಆಕ್ರೋಶದಿಂದಲೇ ಬರೆಯುತ್ತಾರೇ? ಅವರಿಗೆ ಬೇಕಾದದ್ದೇನು? ಎಂಬ ಪ್ರಶ್ನೆಗಳು ಇಂದಿನ ಕನ್ನಡ ಸಾರಸ್ವತ ಲೋಕದಲ್ಲಿ ಆಗಾಗ ಮೇಲೆದ್ದು ಬರುವ ಧೋರಣೆಗಳು. ಇವುಗಳಿಗುತ್ತರವಾಗಿ “ನೊಂದಂವ ಆಡ್ತಾ- ಉಂಡಂವ ಹರಸ್ತಾ’ ಎಂಬೊದು ಗಾದೆಯಿದೆ, ಎಂದಷ್ಟೇ ಹೇಳಬಲ್ಲೆ. ಅಲ್ಲದೆ ನಮ್ಮ ಸಮಾಜ ವ್ಯವಸ್ಥೆಯ ಕಗ್ಗತ್ತಲ ಮೂಲೆಗಳಿಗೆ ಬೆಳಕು ಚೆಲ್ಲಿ ಅನ್ಯಾಯ ಪರಂಪರೆಗೆ ತಡೆಯೊಡ್ಡುವ ಒಂದು ತುರ್ತು ಜವಾಬ್ದಾರಿ ಎಲ್ಲ ಲೇಖಕ/ಲೇಖಕಿಯರ ಮೇಲಿದ ಎಂದೂ ಹೇಳಬಲ್ಲೆ. ಒಟ್ಟನಲ್ಲಿ ಈ ಭೂಮಿಯ ಮೇಲೆ ಹುಟ್ಟಿಬಂದ ಮನುಷ್ಯರೆಲ್ಲರೂ (ಸ್ತ್ರೀ-ಪುರುಷ ಭೇದವಿಲ್ಲದೆ) ಅವರವರ ಪರಿಶ್ರಮ- ಸಾಮರ್ಥ್ಯಕ್ಕನುಗುಣವಾಗಿ ಆದಷ್ಟೂ ಸುಗಮವಾಗಿ- ಆದಷ್ಟೂ ಸಹನೀಯವಾಗಿ ಬದುಕಿಕೊಂಡು ಹೋಗುವಂಥ, ಸಮಾಜ ನಿರ್ಮಾಣದ ಜವಾಬ್ದಾರಿ ನಮ್ಮೆಲ್ಲರದು ಅನ್ನುವದು ನನ್ನ ನಂಬಿಕೆ.
ಈ ಪುಸ್ತಕಕ್ಕೆ “ಬೇಟೆ” ಅನ್ನುವ ಹೆಸರು ಕೊಟ್ಟ ಹಿನ್ನೆಲೆಯಲ್ಲಿ ಇವಿಷ್ಟು ಮಾತು ಚರ್ಚಿಸಬೇಕಾಯಿತು.
ಅದೇನೇ ಇರಲಿ, ನನ್ನ ಈ ಐದನೆಯ ಕಥಾಸಂಕಲನ ಪ್ರಕಟಿಸಲು ಅಕ್ಷಯ ಪ್ರಕಾಶನದ ಶ್ರೀ ಶೀತಾರಾಮ ಹೆಗಡೆಯವರು ಉತ್ಸಾಹದಿ೦ದ ಮುಂದೆ ಬಂದಿದ್ದಾರೆ. ಅವರಿಗೆ ನನ್ನ ಮೊಟ್ಪ ಮೊದಲ ನಮನಗಳು.
ಹಾಗೇ ಇಲ್ಲಿರುವ ಕತೆಗಳನ್ನು ಈ ಮೊದಲೇ ಪ್ರಕಟಿಸಿದ ತುಷಾರ- ವಿಜಯ ಕರ್ನಾಟಕ-ಸಂಜೆ ದರ್ಪಣ-ಲೋಕದರ್ಶನ-ಉದಯವಾಣಿ-ಕರ್ಮವೀರ-ಲೋಕಧ್ವನಿ-ವಿಕ್ರಾ೦ತ ಕರ್ನಾಟಕ ಪತ್ರಿಕೆಗಳ ಸಂಪಾದಕರುಗಳಿಗೆ-
ನನ್ನ ಪತಿ ಶ್ರೀ. ಆರ್. ಎಂ. ಹೆಗಡೆಯವರಿಗೆ ಮತ್ತು ಕುಟುಂಬದ ಎಲ್ಲ ಸಿದಸ್ಯರಿಗೆ-
ಅಚ್ಜುಕಟ್ಟಾಗಿ ಮುದ್ರಿಸಿದ ರವಿಸ್ಕ್ರೀನ್ಸ್ ಬೆಂಗಳೂರು ಇವರಿಗೆ-
ಮುಖಪುಟ ವಿನ್ಯಾಸಗೊಳಿಸಿದ ಶ್ರೀ ಮೋನಪ್ಪ ಅವರಿಗೆ-
ಕನ್ನಡದ ಎಲ್ಲ ಬಂಧುಭಗಿನಿಯರಿಗೆ- ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಸಹೃದಯ ವಿಮರ್ಶೆಗೆ ಸದಾ ಸ್ವಾಗತ.
-ಭಾಗೀರಥಿ ಹೆಗಡೆ
ಶಿರಸಿ
Book Details
- Stories 3
- Quizzes 0
- Duration 50 hours
- Language ಕನ್ನಡ