ಈ ನೆಲದ ಬಾನಾಡಿ – E Nelada Baanadi
Free

ಈ ನೆಲದ ಬಾನಾಡಿ
-
ಮುನ್ನುಡಿ
ಇದು ಕವಿತೆಯಲ್ಲ, ಕತೆಯಲ್ಲ, ಕಾದಂಬರಿಯಲ್ಲ,
ಪತ್ರವಂತೂ ಅಲ್ಲವೇ ಅಲ್ಲ;
ಇದು ಮುನ್ನುಡಿ, ನನಗಾಗಿ,
ನೀವೊಪ್ಪಿಕೊಂಡರೆ ನಿಮಗಾಗಿ ಕೂಡ,
ಇದು ನಾನು ನನ್ನೊಳಬಗೆಯನ್ನು ಬಗಿವ ಬಗೆ
ನನ್ನ ಕರುಳಿನಲ್ಲಿ
ಅವರಿವರ ಹಸಿವಿನ ಗಾಯಗಳನ್ನು
ನನ್ನ ಕಣ್ಣುಗಳಲ್ಲಿ
ಅವರಿವರ ದುಃಖದ,
ಒಮ್ಮೊಮ್ಮೆ ಮರಳುಗಾಡಿನ ಕಳ್ಳಿ ಹೂವಿನ
ದಳದ ಮೇಲಿನ ಮಂಜುಹನಿಯಂತೆ
ಹರ್ಷದ
ಕಣ್ಣೀರನ್ನು ಕಂಡರೆ,
ಕೆಲವೊಮ್ಮೆ ನಿಮ್ಮ ಕಣ್ಣಲ್ಲಿ ಕರುಳಿನಲ್ಲಿ
ಕಂಡಂತೆ, ಮತ್ತು ನಿಮ್ಮ ರಕ್ತ
ಅವರಿವರ ಮೈಯಲ್ಲಿ ಹರಿವುದನ್ನು ಕಂಡಂತೆ
ನಿಮಗಾಗಬೇಕಾದ್ದು ಅವರಿಗಾದಂತೆ
ಅವರಿಗಾಗಬಾರದ್ದು ನಿಮಗಾದಂತೆ
ಅನಿಸಿದರೆ,
ನನ್ನ ಒಳಬಗೆಯಲ್ಲಿ ನಾನೆಷ್ಟು ಬಗಿದು ತೋರಿದರೂ
ನೀವು ನನ್ನನ್ನು ಕಾಣದೆ
ನಿಮ್ಮನ್ನೇ ಕಂಡರೆ,
ನನ್ನ ಶಬ್ದಗಳೆಲ್ಲ ನಿಮ್ಮ ಶಬ್ದಗಳೇ ಆದರೂ
ನನ್ನ ದನಿ ನಿಮ್ಮದೇ ದನಿಯಾದರೂ
ನಾನು ಬೇರೆ ರೀತಿ ಹಾಡಬಹುದು
ಎಂದು ನೀವೊಪ್ಪಿದರೆ,
ನಾನೂ ನಿಮ್ಮಷ್ಟೇ ಶಾಶ್ವತ
ನೀವು ಹಾಲ್ಕಡಲಾದರೆ ನಾನೂ ಹಾಲ್ಕಡಲೇ
ನೀವು ಉಪ್ಪು ಕಡಲಾದರೆ ನಾನೂ ಉಪ್ಪು ಕಡಲು
ಎರಡೂ ಸವಿಯೇ
ಬೇರೆ ಬೇರೆಯಾಗಿ, ಒಟ್ಟಿಗೆ ಅಲ್ಲ ಎನುವ,
ಉಪ್ಪನ್ನು ಮಾಯಮಾಡಿ
ಹಾಲಲ್ಲಿ ಮಾಯವಾಗುವ
ದೇವಗಂಗೆ ನೀವಾದರೆ
ನಿಮ್ಮ ಅಭಿಪ್ರಾಯವೇ ನನ್ನದೂ.
ಅವರಿವರ ಅಭಿಪ್ರಾಯಗಳನ್ನು
ತನ್ನದೇ ಎಂಬಂತೆ
ಇದೇ ಭರತವಾಕ್ಯ ಎಂಬಂತೆ
ಹೇಳುತ್ತೇನೆಂದು ನೀವು ದೂರಿದರೆ
ದುಃಖವೇನಿಲ್ಲ; ಯಾಕೆಂದರೆ,
ನಾನು ಇಲ್ಲ, ನನ್ನದು ಇಲ್ಲ
ಎಲ್ಲಾ ನೀವೇ, ಅದರಲ್ಲಿ ಒಂದು ಹನಿ ನಾನು
ಎಂಬ ಅರಿವಿದೆ ನನಗೆ.
ಅದಲ್ಲದೆ, ನಾನು ಎಂಬುದೊಂದು ಬೇರೆ ಇದ್ದರೆ,
ನಾನು ನಿಮ್ಮನ್ನೆಲ್ಲ ಬಿಟ್ಟು
ಈ ಶಬ್ದಗಳನ್ನು
ಈ ಕವಿತೆಯನ್ನು
ಮತ್ತು ಇದೇನೂ ಅಲ್ಲದ್ದನ್ನು
ನಿಮ್ಮನ್ನು ಬಿಟ್ಟು
ನಾನು ಎನ್ನುವ ಈ ಗೂಡನ್ನು ಬಿಟ್ಟು,
ಎಲ್ಲ ಗ್ರಹಗಳಾಚೆ
ಎಲ್ಲ ನಕ್ಷತ್ರಗಳಾಚೆ
ಎಲ್ಲದರಾಚೆ
ಏನೂ ಇಲ್ಲದರಾಚೆ
ಅದರಾಚೆ
ಹೋಗಿ
ಅಲ್ಲಿ ಏನೂ ಇಲ್ಲದಿದ್ದರೂ
ತಿರುಗಿ ಬಂದು ನಿಮ್ಮಲ್ಲಿ ಹೇಳುತ್ತಿದ್ದೆ
ಅಲ್ಲಿ ಏನೂ ಇಲ್ಲ ಎಂದು.
ಆದರೆ ನೀವಿಲ್ಲದೆ ನಾನಿಲ್ಲ ಎನ್ನುವುದರಿಂದಲೇ
ನನ್ನ ಗಾಯಗಳನ್ನು ನಾನು ನೆಕ್ಕಲೇಬೇಕು
ಬೆಕ್ಕಿನಂತೆ
ಅಥವಾ ಹುಲಿಯಂತೆ.
ಬೆಕ್ಕಿನ ಜೊಲ್ಲು ಬೆಕ್ಕಿಗೆ ಹುಲಿಯ ಜೊಲ್ಲು ಹುಲಿಗೆ
ನನ್ನ ಜೊಲ್ಲು ನನಗೆ
ಔಷಧ.
ನಗಬಹುದು ನೀವು
ನಾನು ನೆಕ್ಕುವ ರೀತಿಯನ್ನು ಕಂಡು.
ಆದರೆ ಒಂದು ಉಚ್ಛ್ವಾಸ
ಮತ್ತು ನಿಶ್ವಾಸದ ನಡುವಿನಲ್ಲಿ,
ನಿಮ್ಮ ಮೈಯಲ್ಲಿ ಗಾಯಗಳಿಲ್ಲದಿದ್ದರೂ
ಒಮ್ಮೆಯಾದರೂ ನಿಮಗನಿಸಬಹುದು
ನಾನು ಅನ್ಯನಲ್ಲ ಎಂದು.
ನಾನು ನೀವೇ ಎಂದು.
ಆ ನಂಬಿಕೆಯಿಂದಲೇ
ಗಾಯಗಳನ್ನು ತೋರಿಸಿಕೊಳ್ಳಬೇಕಾಗಿ ಬಂದುದಕ್ಕೆ
ನಾಚಿಕೊಳ್ಳಬೇಕಾಗಿ ಬಂದರೂ
ಮೊದಲು ನನ್ನ ಗಾಯಗಳನ್ನು ನಾಚಿಕೆ ಬಿಟ್ಟು ನೆಕ್ಕಿ
ನಾಚಿಕೆ ಬಿಟ್ಟು ಬಿಚ್ಚಿಕೊಳ್ಳುತ್ತೇನೆ.
ಇದು ನಿಮ್ಮನ್ನು ಬಿಚ್ಚುವ ಯತ್ನ
ಎಂದು ನೀವು ಶಂಕಿಸಿದರೂ
ನಗ್ನತೆಗೆ ಹೇಸದೆ, ನಾಚದೆ, ಭಯಪಡದೆ
ನಗ್ನತೆಯೇ ಸಹಜ, ಸತ್ಯ, ಸುಂದರ ಎಂದು
ನಿಮ್ಮ ನಗ್ನತೆಯಲ್ಲಿ
ನಾನೂ ನಗ್ನವಾಗುತ್ತಾ
ಹೇಳಿಕೊಂಡದ್ದು ಇದು,
ಹೊಸತು ಏನೂ ಇಲ್ಲ.
****
ಕಾವ್ಯವೆಂದರೆ ಸುಂದರವಾದ ಶಬ್ದಗಳಲ್ಲ.
ಸುಂದರವಾದ ಶಬ್ದಗಳೆಂದರೇನು?
ಸಂಗೀತವಿರುವ, ನಾದವಿರುವ ಶಬ್ದಗಳೆ?
ನಾದವಿಲ್ಲದ ಸಂಗೀತವಿಲ್ಲದ ಶಬ್ದವೇ ಇಲ್ಲ.
ಕಾವ್ಯ ಚೇತನ, ಕಾವ್ಯ ಬಿಡುಗಡೆ,
ಕಾವ್ಯ ಪ್ರೀತಿ, ಪ್ರೇಮ; ಎಲ್ಲಾ ಒಳ್ಳೆಯದು ಕಾವ್ಯ.
ಆಲ್ ಡೀಪ್ ಥಿಂಗ್ಸ್ ಆರ್ ಪೊಯಿಟ್ರಿ- ಕಾರ್ಲೈಲ್.
ಅರ್ಥವಾಗದ್ದು ಮಾತ್ರ ಕಾವ್ಯವೆ?
ಖಂಡಿತ ಅಲ್ಲ.
ಅರ್ಥವಾದದ್ದು?
ಅದೂ ಅಲ್ಲ
ಕಾವ್ಯವೆಂದರೆ, ಅರ್ಥವನ್ನು ಹುಡುಕಲು ಕಲಿಸುವುದು
ಕೀಟ್ಸ್ ಹುಡುಕಿದ್ದು…..ದ ಮೈಟಿ ಆ್ಯಬ್ಸ್ಟ್ರಾ ್ಯಕ್ಟ್ ಐಡಿಯ ಆಫ್ ಬ್ಯೂಟಿ
ಅವನು ಕಂಡದ್ದು ಟ್ರುತ್ ಈಸ್ ಬ್ಯೂಟಿ, ಬ್ಯೂಟಿ ಟ್ರುತ್
ಆದರೂ ಹರ್ಡ್ ಮೆಲಡೀಸ್ ಆರ್ ಸ್ವೀಟ್ ಮೆಲಡಿ ಅನ್ಹರ್ಡ್
ಸ್ವೀಟರ್ ಅಂತಂದದ್ದು ಟೆನಿಸನ್
ಅದನೇ ಇರಬಹುದು
ಶ್ರುತಗಾನಮಭಿರಾತರಮಾದೊಡಶ್ರುತಗಾನಮಭಿರಾಮತರ
ಎಂದದ್ದು ಗುಂಡಪ್ಪ;
ಎಂದಿಗೂ ಕಾಣಲಾಗದ ಕೊನೆಯ ದೃಶ್ಯ, ಕೇಳಲಾಗದ ಕೊನೆಯ ಶಬ್ದ
ಅದೇ ಕಾವ್ಯ, ಅದೇ ವಿಜ್ಞಾನ ಎಂದಿಗೂ ಸಿಗಲಾರದ್ದನ್ನು
ಹುಡುಕುವುದು ಬೆರಗುಗೊಳ್ಳುವುದು-ಅದು ನನ್ನ ಧರ್ಮ ಎಂದ ಐನ್ಸ್ಟೀನ್
ದರ್ಶನವಿರುವುದು ಲೋಕಪ್ರಸಿದ್ಧ ತತ್ವಜ್ಞಾನಿಯ ಪುಸ್ತಕದಲ್ಲಿ ಮಾತ್ರವೇ ಅಲ್ಲ,
ದರ್ಶನ ಇದೆ ಧೂಳಿನಲ್ಲಿ ಬಿದ್ದಿರುವ ಅನಾಥ ಹೆಂಗಸಿನ ಎದೆಯಾಳದಲ್ಲಿ,
ಹೆತ್ತಮ್ಮನಿಗೇ ಗುರುತು ಸಿಗದಷ್ಟು ಬೆವರಂಟಿಸಿಕೊಂಡು ಮಣ್ಣು ಹೊರುವ
ಹುಡುಗನ ಕೆಟ್ಟ ಹಾಡಿನಾಳದಲ್ಲಿ;
ಕಾವ್ಯ ಇದೆ ಹೊರೆಯಾಳಿನ ಕತ್ತಿನಲುಗಾಟದಲ್ಲಿ,
ಸೂಳೆಯ ಕೊಳೆತ ತೊಡೆಗಳಲ್ಲಿ
ಅಮ್ಮನ ಕಣ್ಣೀರ ಜೋಗುಳದಲ್ಲಿ ಮತ್ತು ಬೈಗುಳದಲ್ಲಿ
ಬಡವನ ಹರಿದ ಚಪ್ಪಲಿಯಲ್ಲಿ ಕೂಡ.
ಕೇವಲ ನಾದ ಕಾವ್ಯವಲ್ಲ, ನಾದದೊಳಗಿನ ಅರ್ಥ ಕಾವ್ಯ.
ಥೋಟ್ಸ್ ದ್ಯಾಟ್ ಬ್ರೇಕ್ ಥ್ರೂ ಲಾಂಗ್ವೇಜ್ ಆ್ಯಂಡ್ ಎಸ್ಕೇಪ್- ಬ್ರೌನಿಂಗ್
ಎ ಮೊಮೆಂಟರಿ ಸ್ಟೇ ಎಗೆನ್ಸ್ ್ಟ ಕನಫ್ಯೂಷನ್- ಈಲಿಯಟ್
ಕಾವ್ಯ ನೀತಿ ಶಾಸ್ತ್ರವಲ್ಲ.
ಕಾವ್ಯ ಸಂತೋಷ, ಕಾವ್ಯರಾಹಿತ್ಯ ದುಃಖ.
ಯಾರು ಕವಿಗಳು, ಯಾರಲ್ಲ ಕವಿಗಳು?
ಒಳ್ಳೆಯವರೆಲ್ಲ ಕವಿಗಳು ಸಂತೋಷವಾಗಿರುವವರೆಲ್ಲ ಕವಿಗಳು,
ಸಂತೋಷ ಕೊಡುವವರೆಲ್ಲ ಕವಿಗಳು.
ಭ್ರಷ್ಟರು, ಕಪಟ ಮೋಸ, ವಂಚನೆಯಲಿ ನಿರತರಾದವರು ಕವಿಗಳಲ್ಲ;
ಕೆಟ್ಟದ್ದನ್ನು ಮಾಡುವವನು ದುಃಖಿ. ಅವನೇ ದಾನವ.
ಇರಬಹುದು ಕಾವ್ಯ ಕೇವಲ ಸಂತೋಷದ
ನಾಡಿ ಬಡಿತಕ್ಕಾಗಿ;
ಆದರೂ ಮನುಷ್ಯರು ದುಃಖಿಗಳಾಗಲು ಸಿದ್ಧರಿರುವುದು ಏನಚ್ಚರಿ!
ಸಾವು ಇದೆ ಎಂದು ಗೊತ್ತಿದ್ದರೂ ಸಾವಿಲ್ಲವೆಂಬಂತೆ ಬದುಕುವ ಪರಿ!
ಕಾವ್ಯ ಮನುಷ್ಯನ ಸ್ವಂತ ಸೊತ್ತೇನು?
ಗಿಡಗಂಟಿಗಳ ಕೊರಳೊಳಗಿಂದ ಹೊರಡುವ ಹಾಡು ಎಂದ ಬೇಂದ್ರೆ.
ಹಿಡಿದುಕೊಳ್ಳಬೇಕು ಕಾಣಿಸದ ಕೇಳಿಸದ ಸ್ಪರ್ಶಕ್ಕೆ ಸಿಗದ ಅನುರಣನವ
ಅದು ದರ್ಶನ, ಅದು ವಿಜ್ಞಾನ, ಅದು ಕಾವ್ಯ.
**
-
ಹಕ್ಕಿಗೆ
ನೂರಾರು ವರ್ಷಗಳಿಂದ ಕುಳಿತುಕೊಂಡಿತ್ತು ಹಕ್ಕಿ ಆ ಮರದಲ್ಲಿ
ಮೊನ್ನೆಯಷ್ಟೇ ಗೂಡಿನ ಕೆಲಸ ಮುಗಿಸಿ ಮೊಟ್ಟೆಯಿಟ್ಟು
ಬಳಲಿ ರಾತ್ರಿ ತಣ್ಣಗೆ ಮಲಗಿತ್ತು.
ನಿನ್ನೆ ಹಗಲೆಲ್ಲೊ ಹೋಗಿ ಸಂಜೆಗೆ ಮರಳಿ ಬಂದಾಗ
ಮರ ಮಾಯವಾಗಿತ್ತು.
ಬೇಲಿಯ ಬದಿಯ ಪೊದರಲ್ಲಿ ಕುಳಿತು ರಾತ್ರಿಯಿಡೀ ಅತ್ತಿತು ಹಕ್ಕಿ
ಅದರ ಕಿರುಚಾಟ ತನ್ನ ಇಡೀ ರಾತ್ರಿಯ
ನಿದ್ರೆಯನ್ನು ಕೆಡಿಸಿತು ಎಂದರು ಗೌಡರು;
ಅದರ ಕೂಗಿಗೆ ರಾತ್ರಿ ಬಹಳ ಹೊತ್ತು ನಿದ್ದೆಯೇ ಬರಲಿಲ್ಲ
ಎಂದರು ಗೌಡರ ಹೆಂಡತಿ;
ಎಷ್ಟೊಂದು ಸುಂದರವಾಗಿ ಹಾಡುತ್ತಿತ್ತು ಹಕ್ಕಿ ರಾತ್ರಿ ಪೂರ್ತಿ!
ಎಚ್ಚರವೋ ಕನಸೋ ತಿಳಿಯಲಿಲ್ಲ
ಎಂದಳು ಷೋಡಶಿ ಗೌಡರ ಮಗಳು.
ನಿದ್ರೆ ಬಂದಿತ್ತು ನನಗೆ ಛಿದ್ರ ಛಿದ್ರ ಛಿದ್ರ
ಇದು ಕವಿತೆಯಲ್ಲ ನನ್ನೊಡಲಲ್ಲಿ
ನಿನ್ನ ಕೂಗು ಕೊರೆದ ವಿಷಾದದ ಗೆರೆ ಹಕ್ಕಿಯೆ,
ಏನು ಮಾಡಬಲ್ಲೆ, ಬಡವ ನಾನು;
ಹೋದ ನಿನ್ನ ಮರ ಹಿಂದಕ್ಕೆ ತರಲಾರೆ
ಬೇರೆ ಮರ ಕೊಡಲಾರೆ, ಕೊಡಿಸಲಾರೆ
ಕಡಿದವರಿಗೆ ಬಡಿದರೆ ನಿನ್ನ ಗೂಡು ಮೊಟ್ಟೆ ಸಿಗುವುದಿಲ್ಲ.
ಈ ಕವಿತೆ ಕೂಡ ಗೌಡರ ಕುಮಕಿಯ ಆಲದ ಮರದಡಿಯಲ್ಲಿ
ಕುಳಿತು ಬರೆದದ್ದು, ನನಗೆ ಬೇರೆ ಮರವಿಲ್ಲ
ನನ್ನ ಗೂಡು ಕೂಡ ತಾನೇ ತಾನಾಗಿ ಎದ್ದು ನಿಂತ
ಯಾವುದೋ ಅನಾಮಧೇಯ ಸ್ಮಾರಕದ ಗೋಡೆಯಡಿ ಸೇರಿದೆ;
ನಿನಗೆ ಈ ರಾತ್ರಿ ಬೇರೆ ಮರ ಸಿಗಬಹುದು
ಈ ರಾತ್ರಿ ಗೌಡರ ನಿದ್ದೆಗೆ ಭಂಗವಿಲ್ಲ
ಗೌಡಿತಿಯೂ ಹಾಯಾಗಿ ನಿದ್ರಿಸಬಹುದು
ಗೌಡರ ಮಗಳ ಕನಸಿನಲ್ಲಿ ಈ ರಾತ್ರಿ ನಿನ್ನ ಹಾಡಿಲ್ಲ
ನಾಳೆ ಬೆಳಗ್ಗೆದ್ದು ಅವಳು ಹಾಡನ್ನು ಹುಡುಕುತ್ತಾ ಬರಬಹುದು
ಜೋಕೆ ಮತ್ತೆ ಕಟ್ಟದಿರು ಗೂಡು!
**
-
ಕೇವಲ ನನ್ನ ಖುಷಿಗಾಗಿ
ಹೇಗಿರುವಿ ಎಂದು ನೀವು ಅಷ್ಟು ಎತ್ತರದ ದನಿಯಲ್ಲಿ ಕೇಳಿದ್ದು
ಪ್ರೀತಿಯಿಂದಲೇ ಎಂದುಕೊಂಡಿದ್ದೇನೆ.
ಪ್ರೀತಿ ಹರಿಯಬಲ್ಲುದು ಎತ್ತರದಿಂದ ತಗ್ಗಿಗೂ
ತಗ್ಗಿಂದ ಎತ್ತರಕ್ಕೂ,
ನಿಮ್ಮ ಎತ್ತರಕ್ಕೆ ನನ್ನಿಂದೇರಲಾಗಲಿಲ್ಲವೆಂದು
ನನಗೆ ದುಃಖವಿಲ್ಲ;
ಅಂದು ಸುಬ್ಬಪ್ಪ ಮಾಸ್ತರು ನಮ್ಮನ್ನು ಬೆಂಚಿನ ಮೇಲೇರಿಸಿ
ಒಂಟಿಗಾಲಲ್ಲಿ ನಿಲ್ಲಿಸಿದ್ದು
ಕೆಳಗೆ ಬೆಂಚಿನಲ್ಲಿ ಕುಳಿತ ಹುಡುಗಿಯರು ಕಿಲಕಿಲ ನಕ್ಕದ್ದು
ನಮ್ಮ ಎತ್ತಿದ ಕಾಲು ಕೆಳಗಿಳಿದಾಗಲೆಲ್ಲ
ಸುಬ್ಬಪ್ಪ ಮಾಸ್ತರು ಬೆತ್ತದಿಂದ ಆ ಕಾಲಿಗೇ ಬಾರಿಸಿದ್ದು
ನಮ್ಮ ಕಣ್ಣುಗಳಲ್ಲಿ ಗಂಗಾಪ್ರವಾಹವನ್ನು ಕಂಡು
ಹುಡುಗಿಯರು ಕೂಡ ಗಂಗೆಯರಾದದ್ದು
ಒಬ್ಬಳಂತೂ ಮುಖ ಮುಚ್ಚಿ ಜೋರಾಗಿ ಬಿಕ್ಕಿದ್ದು;
ಆ ಹುಡುಗಿ ಕಲ್ಯಾಣಿ ಮೊನ್ನೆ ಸಿಕ್ಕಿದ್ದಳು.
ಹೇಗಿರುವಿ ಎಂದು ಅದೇ ಹಳೆಯ ದನಿಯಲ್ಲಿ ಕೇಳಿದಾಗ
ನನಗೆ ನೆನಪಿಗೆ ಬಂದದ್ದು ಹುಡುಗಿಯರು ನಗು ಮತ್ತು ಅಳು,
ಹುಡುಗಿ ಅಂದರೆ ಅದೇ ಅಂದುಕೊಂಡಿದ್ದೆ ನಗು ಮತ್ತು ಅಳು,
ಎರಡೂ ಒಂದೇ ಎಂಬಂತೆ, ಬದುಕು ಕೂಡ ಇಷ್ಟೇ ಎಂಬಂತೆ
ನಗು ಅಳುವಿನಾವರ್ತನ,
ಅಲೆಗಳ ನಡುವೆ ಸ್ವಲ್ಪ ಮೌನ ಕಡಲಿನಂತೆ,
ಆ ಮೌನದಲ್ಲಿ ಎಲ್ಲ ಸುಖ ದುಃಖಗಳ ನಿಗೂಢ ಅನಾವರಣ
ಸ್ವರದ ಏರು ಇಳಿತ ಎಲ್ಲ ಆ ಮೌನದಲ್ಲಿ ಲೀನ.
ಹೇಗಿರುವಿ ಎಂದು ಕೇಳಿ ನನ್ನ ಉತ್ತರ ಪೂರ್ತಿಯಾಗುವ ಮೊದಲೇ
ಎಲ್ಲಾ ಚೆನ್ನಾಗಿದೆ ಎಂಬ ಭಾವದಲ್ಲಿ ನೀವು ಮುಗುಳುನಗೆ ಬೀರಿ
ಡ್ರೈವರು ತೆರೆದು ಹಿಡಿದ ಬಾಗಿಲಿನಿಂದಾಚೆ ನೀಲಿ ಗಾಜಿನ ಹಿಂದೆ
ಮಾಯವಾದದ್ದು
ಯಾವ ಹಳೆಯ ನೆನಪೂ ತರಲಿಲ್ಲ.
ಆದರೆ ನೀವು ಹೋದ ನಂತರದ ಮೌನದಲ್ಲಿ
ಕಲ್ಯಾಣಿಯನ್ನು ನೆನಪಿಸಿಕೊಳ್ಳುತ್ತೇನೆ;
ನನ್ನ ಖುಷಿಗಾಗಿ,
ಮತ್ತು ಕೇವಲ ನನ್ನ ಖುಷಿಗಾಗಿ
ಆ ಎಲ್ಲ ಹುಡುಗಿಯರನ್ನು ನೆನಪಿಸಿಕೊಳ್ಳುತ್ತೇನೆ.
**
Book Details
- Stories 2
- Quizzes 0
- Duration 50 hours
- Language Kannada