Labangi – ಲಬಂಗಿ

ಪ್ರಕಾಶಕರ ನುಡಿ
ರಾಷ್ಟ್ರಪಿತಮಹಾತ್ಮ ಗಾಂಧೀಜಿಯವರ ಕನಸಾದ ಸ್ವಾವಲಂಭಿ ಶಿಕ್ಷಣ ವ್ಯವಸ್ಥೆಯನ್ನು ಸಮಾಜಕ್ಕೆ ಸಮರ್ಪಿಸುವ ಮಹತ್ಕಾರ್ಯದಲ್ಲಿ ಕೈಜೋಡಿಸಲು 1946ರರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಶಿವಮೊಗ್ಗೆಯ ಪ್ರತಿಷ್ಠ ಯುವ ನಾಗರೀಕರು ಹುಟ್ಟುಹಾಕಿದ ಸಂಸ್ಥೆ- ರಾಷ್ಟ್ರೀಯ ಶಿಕ್ಷಣ ಸಮಿತಿ ಇದರ ಹುರಿಯಾಳುಗಳು ಎಸ್.ಆರ್. ನಾಗಪ್ಪಶ್ರೇಷ್ಠಿ, ಎಸ್.ವಿ ಕೃಷ್ಣಮೂರ್ತಿರಾವ್, ಎಚ್.ಎಸ್. ರುದ್ರಪ್ಪ ಡಿ.ಆರ್. ರತ್ನಾಕರ, ಕಡಿದಾಳ ಮಂಜಪ್ಪ, ಆರ್.ಕೆ. ಜಯತೀರ್ಥಾಚಾರ್, ಡಿ.ಎಸ್. ದಿನಕರ್, ಗಿರಿಮಾಜಿ ರಾಜಗೋಪಾಲ್ ಮೊದಲಾದವರು, ಆಗ ಬೈಸಿಕಲ್ ತುಳಿದು ಹಣ ಸಂಗ್ರಹಿಸಿ ಒಂದು ಪ್ರೌಢಶಾಲೆಯೊಂದಿಗೆ ಪ್ರಾರಂಭವಾದ ಸಂಸ್ಥೆ, ಇಂದು 40 ಶಿಕ್ಷಣ ಸಂಸ್ಥೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವುದು ಪರಿಶ್ರಮಕ್ಕೆ ಹಿಡಿದ ಕನ್ನಡಿ. ಆಗಿನ ಕಾಲದಲ್ಲೇ ದೇಶದ ಪ್ರಥಮ ರಾಷ್ಟ್ರಪತಿ ಡಾ. ಬಾಬುರಾಜೇಂದ್ರಪ್ರಸಾದ್, ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ರಾಷ್ಟ್ರಕವಿ ಕುವೆಂಪುರಂತಹ ಮಹನೀಯರುಗಳು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಿದ್ದಾರೆ ಪ್ರಸ್ತುತ ಸಂಸ್ಥೆಯ ಸಾರಥ್ಯವನ್ನು ಡಿ.ಆರ್. ರತ್ನಾಕರ್, ಜಿ ನಂಜುಂಡಪ್ಪ, ಎಸ್.ವಿ. ತಮ್ಮಯ್ಯ, ಎನ್.ಟಿ. ನಾರಾಯಣ ರಾವ್, ಟಿ.ಆರ್. ಅಶ್ವಥ್ ನಾರಾಯಣ್ ಮತ್ತು ಸಮರ್ಥ ನಿರ್ದೇಶಕ ಮಂಡಳಿಯವರು ವಹಿಸಿ ಶಿಕ್ಷಣದ ತೇರು ಎಳೆಯುತ್ತಿದ್ದಾರೆ.
ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಚೊಕ್ಕವಾಗಿ ನಡೆಸುತ್ತಾ ’ಶಿಕ್ಷಣ ದಾಸೋಹ’ ಮಾಡುವುದರ ಜತೆಜತೆಗೇ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ನೌಕರರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಿ ಸಮಾಜಕ್ಕೆ ಪರಿಚಯಿಸುವ ಕೆಲಸವನ್ನೂ ಸಂಸ್ಥೆ ಮಾಡುತ್ತಲೇ ಬಂದಿದೆ. ಸಾಹಿತ್ಯ, ಸಂಗೀತ, ನಾಟ್ಯ, ನಾಟಕ, ಕ್ರೀಡೆಗಳು ಮೊದಲಾದ ಎಲ್ಲ ಕ್ಷೇತ್ರಗಳ ‘ಪ್ರತಿಭೋತ್ಖನನ’ ಸಂಸ್ಥೆಯಲ್ಲಿ ನಡೆಯುವ ನಿರಂತರ ಕ್ರಿಯೆ. ತನ್ಮೂಲಕ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ಪ್ರತಿಭೆಗಳನ್ನು ಸಮಾಕ್ಕೆ ಕೊಡುಗೆಯಾಗಿ ನೀಡಿದೆ.
ಸುದೀರ್ಘವಾದ ಈ ಪಟ್ಟಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ವಿಜೇತ ಶ್ರೀಯುತ. ಡಿ.ಎನ್. ಶ್ರೀನಾಥ್ ಹೊಸ ಸೇರ್ಪಡೆಯೇನಲ್ಲ. ಇದಕ್ಕೂ ಮೊದಲು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಯುತರು ಪ್ರಶಸ್ತಿಗಾಗಿ ಸಾಹಿತ್ಯ ಕೃಷಿಗೆ ತೊಡಗಿಕೊಂಡವರೂ ಅಲ್ಲ. ಅವರಿಗೆ ಪ್ರಶಸ್ತಿ ಬಂದರೆ, ಆ ಪ್ರಶಸ್ತಿಗೇ ಗೌರವ ಸಂದಂತೆ ಎನ್ನಬಹುದು. ಸರಳ ಸಜ್ಜನಿಕೆಯ ಪ್ರತಿರೂಪವೇ ಆಗಿರುವ ಶ್ರೀಯುತರು ಪ್ರಸ್ತುತ ನಮ್ಮ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದೇ ನಮಗೆ ಹೆಮ್ಮೆಯ ವಿಷಯ. ಸುಮಾರು 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಯುತ ಡಿ.ಎನ್. ಶ್ರೀನಾಥ್ ವರು ಒಂದು ರೀತಿಯಲ್ಲಿ ನಮ್ಮ ಸಾಂಸ್ಕೃತಿಕ ರಾಯಭಾರಿ ಎಂದೇ ಹೇಳಬಹುದು. ಅವರು ನಮ್ಮ ಆಶಯವನ್ನು ಮನ್ನಿಸಿ, ತಮ್ಮ ಅನುವಾದಿತ ಕಾದಂಬರಿ (’ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದದ್ದು) ‘ಲಬಂಗಿ’ಯನ್ನು ಸಂಸ್ಥೆಯ ವತಿಯಿಂದ ಪ್ರಕಾಶಿಸಲು ಅನುಮತಿ ನೀಡಿದ್ದು ಅವರ ಸಂಸ್ಥೆಯ ಮೇಲಿನ ಪ್ರೀತಿಯನ್ನು ಸೂಚಿಸುತ್ತದೆ. ಈ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವ ನಾವು ಎಂದಿನಂತೆ ಇದೂ ಕೂಡ ಜನರ ಮೆಚ್ಚುಗೆ ಪಡೆಯಬಲ್ಲದು ಎಂದು ಆಶಿಸುತ್ತೇವೆ.
ಶಿವಮೊಗ್ಗ ಎಸ್.ವಿ. ತಿಮ್ಮಯ್ಯ, ಕಾರ್ಯದರ್ಶಿ
10.4.2010 ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ.), ಶಿವಮೊಗ್ಗ
ಕೃತಿಕಾರರನ್ನುಕುರಿತು ….
ಇಂಗ್ಲೀಷ್ನಿಂದ ಅನೇಕ ಕೃತಿಗಳು ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುತ್ತಿವೆ. ಆದರೆ ಬಹು ಭಾಷೆಗಳ ಬಹು ಸಂಸ್ಕೃತಿಗಳ ನಾಡಾದ ಭಾರತದ ಲ್ಲಿಭಾರತೀಯ ಭಾಷೆಗಳ ನಡುವಣ ಅನುವಾದ ತೀರಾ ಕಡಿಮೆ. ವಿಭಿನ್ನ ಭಾಷೆಗಳಲ್ಲಿ ಪ್ರತಿಫಲಿತಗೊಂಡಿರುವ ಭಾರತೀಯ ಬದುಕು ಮತ್ತು ಸಾಹಿತ್ಯದ ವೈವಿದ್ಯತೆ, ಅನನ್ಯತೆಯನ್ನು ಅರ್ಥಮಾಡಿಕೊಳ್ಳಲು ಎಲ್ಲಾ ಭಾಷೆಗಳ ಅಂತರ್ ದರ್ಶನ ಮೂಡಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲೇ ಇರುವ ಒಳ್ಳೆಯ ಲೇಖಕರೂ ಅಪರಿಚಿತರಾಗಿ ಉಳಿದು ಭಾರತೀಯ ಸಾಹಿತ್ಯದ ಸಮಗ್ರ ಚಿತ್ರಣ ಅಲಭ್ಯವಾಗುತ್ತದೆ. ಇಂತಹ ಕೊರತೆಯನ್ನು ತುಂಬಿಕೊಳ್ಳುವ ಕಾಳಜಿಯೊಂದಿಗೆ ಕೆಲಸ ಮಾಡುತ್ತಿರುವ ಕೆಲವೇ ಜನ ಭಾರತೀಯರಲ್ಲಿ ಕನ್ನಡದ ಡಿ.ಎನ್. ಶ್ರೀನಾಥ್ ಕೂಡ ಒಬ್ಬರು.
ಡಿ.ಎನ್. ಶ್ರೀನಾಥ್ ರವರು (12.3.1950) ಕನ್ನಡ ಅನುವಾದ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಾಧನೆಯ ದಾರಿಯಲ್ಲಿ ಸಾಗಿದವರು, ತಮ್ಮ 18ನೇ ವಯಸ್ಸಿನಲ್ಲೇ ಅನುವಾದ ಕ್ಷೇತ್ರವನ್ನು ಪ್ರವೇಶಿಸಿ ನಲವತ್ತು ವರ್ಷಗಳಿಗೂ ಮೇಲ್ಪಟ್ಟು ಈ ಕಾರ್ಯದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಹಿಂದಿಯಿಂದ ಕನ್ನಡಕ್ಕೆ ಕನ್ನಡದಿಂದ ಹಿಂದಿ ಭಾಷೆಗೆ ಇವರ 38ಕ್ಕೂ ಹೆಚ್ಚು ಪುಸ್ತಕಗಳು ಅನುವಾದಗೊಂಡು ಪ್ರಕಟಗೊಂಡಿವೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರು ಅನುವಾದಿಸಿದ ಏಳು ನೂರಕ್ಕೂ(700) ಮೇಲ್ಪಟ್ಟ ಕಥೆ ಕವನ ಲೇಖನಗಳು ಪ್ರಕಟಗೊಂಡಿವೆ. ಕನ್ನಡದ ಹಲವಾರು ಕಥೆ ಮತ್ತು ಕವನಗಳು ಹಿಂದಿಗೆ ಅನುವಾದಿಸಿದ್ದು ಅವು ಹಿಂದಿಯ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೈಸೂರು ವಿಶವವಿದ್ಯಾಲಯವು ಪ್ರಕಟಿಸಿದ “ಕನ್ನಡ್ ಕಿ ಶ್ರೇಷ್ಠಕಹಾನಿಯಾಂ” ಮತ್ತು “ರಾಷ್ಪ್ರಕವಿ ಕುವೆಂಪು ಕಿವಿತಾಯೆO’ ಎಂಬ ಪುಸ್ತಕಗಳಲ್ಲಿ ಇವರ ಅನುವಾದಿತ ಕಥೆ ಮತ್ತು ಕವನಗಳು ಪ್ರಕಟಗೊಂಡಿವೆ. ಕನ್ನಡದ ಐದು ನಾಟಕಗಳು ಮತ್ತು ಒಂದು ಕವನ ಸಂಕಲನ ಹಿಂದಿಯಲ್ಲಿ ಪ್ರಕಟಣೆಗಾಗಿ ಸಿದ್ಧಗೊಂಡಿದೆ. ಇವರು 1998ರಲ್ಲಿ ಅನುವಾದಿಸಿದ “ಇಪ್ಪತ್ತು ಭಾರತೀಯ ಕಥೆಗಳು” ಎಂಬ ಕೃತಿಯಲ್ಲಿ ಅಸ್ಸಾಮಿ, ಡೋಗರಿ, ಒರಿಯಾ, ಮಣಿಪುರಿ ಮುಂತಾದ ಭಾರತದ ಇಪ್ಪತ್ತು ಬೇರೆ ಬೇರೆ ಭಾಷೆಗಳಿಂದ ಹಿಂದಿಗೆ ಅನುವಾದಗೊಂಡ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಶ್ರೀಯುತ ಡಿ.ಎನ್. ಶ್ರೀನಾಥ್ ರವರದು ಯಾವತ್ತೂ ತೋರುಗಾಣಿಕೆ, ಕೃತಕತೆ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿತ್ವ. ಯಾವ ಬಾಜಾ ಭಜಂತ್ರಿಯೂ ಇಲ್ಲದೆ ತಮ್ಮಷ್ಟಕ್ಕೆ ಅನುವಾದ ಕಾರ್ಯದಲ್ಲಿ ತೊಡಗಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಜಿ.ಎಸ್.ಎಸ್. ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಲೇಖಕರನ್ನು ಹಿಂದಿಗೆ ಪರಿಚಯಿಸಿದ ಹಿರಿಮೆ ಇವರದು. ಕೃತಿಗೆ, ಕೃತಿಕಾರನಿಗೆ ನ್ಯಾಯ ಒದಗಿಸುವ ನಿಟ್ಪಿನಲ್ಲಿ ಅನುವಾದಕ ಸದಾ ಅಧ್ಯಯನ ಶೀಲನಾಗಿರಬೇಕು ಎಂದು ನಂಬಿರುವ ಶ್ರೀನಾಥ್ ರವರು ಮೂಲ ಕೃತಿಯ ಎಲ್ಲಾ ಸೂಕ್ಷ್ಮತೆ, ಸತ್ಯ ಮತ್ತು ಆಶಯಗಳು ಓದುಗನಿಗೆ ಸಂವಹನಗೊಳ್ಳಲು ಅಡ್ಡಿಯಾಗದಂತೆ ಸಮರ್ಥವಾಗಿ ಅನುವಾದಿಸುತ್ತಾರೆ. ಆಯಾ ಭಾಷೆಯ ಜಾಯಮಾನಕ್ಕೆ ಅದನ್ನು ಬಗ್ಗಿಸಿಬಿಡುತ್ತಾರೆ. ಶ್ರೀನಾಥ್ ರವರ ಅನುವಾದಗಳ ಮಹತ್ವ ಇರುವುದು ಇಲ್ಲಿಯೆ ಅನುವಾದಗಳ ಅಗತ್ಯ ಕುರಿತು ಅವರು “ಅಪರಿಚಿತತೆ ಎನ್ನುವುದು ಅಪನಂಬಿಕೆ ಅವಿಶ್ವಾಸಕ್ಕೆ ಈಡು ಮಾಡುತ್ತದೆ. ಇನ್ನೊಂದು ಭಾಷೆಯ ಸಾಹಿತ್ಯದ ಓದಿನ ಮೂಲಕ ಆ ಭಾಷೆ, ಸಂಸ್ಕೃತಿಗಳ ಲೇಖಕರ ಪರಿಚಯ ಸಂಪರ್ಕ ಸಾಧ್ಯವಾಗುತ್ತದೆ. ಇಂತಹಾ ಆಧಾನ- ಪ್ರಧಾನ ಪ್ರಕ್ರಿಯೆ ಸದಾ ಭಾಷೆಗಳ ನಡುವೆ ನಡೆಯುತ್ತಿದ್ದರೆ ಆ ಭಾಷೆ ಮತ್ತು ಸಾಹಿತ್ಯ ಇನ್ನಷ್ಟು ವಿಸ್ತಾರತೆಯನ್ನು ಪಡೆಯುತ್ತದೆ. ವಿಶ್ವ ಒಂದೇ ಎಂದು ಹೇಳುವುದಕ್ಕೆ ಅನುವಾದದ ಅಗತ್ಯವಿದೆ” ಎನ್ನುತ್ತಾರೆ. ಅನುವಾದವನ್ನು ಒಂದು ವ್ರತದಂತೆ ಸ್ವೀಕರಿಸಿರುವ ಈ ಸಾಂಸ್ಕೃತಿಕ ರಾಯಭಾರಿಯ ಸಾಧನೆಗೆ ಸಂದ ಪ್ರಶಸ್ತಿಗಳು ಹಲವಾರು.
“ಜಗತ್ತಿನ ಏಳು ಅದ್ಭುತಗಳು” ಎಂಬ ಮಾನವಿಕ ಪುಸ್ತಕಕ್ಕೆ 1983ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಭಾಷಾ ಲೇಖಕ ಪ್ರಶಸ್ತಿ, 1998ರಲ್ಲಿ “ಇಪ್ಪತ್ತು ಭಾರತೀಯ ಕಥೆಗಳು” ಅನುವಾದಿತ ಕಥಾ ಸಂಕಲಕ್ಕೆ ಗೊರೂರು ಪ್ರಶಸ್ತಿ 1998 ರಲ್ಲಿ ಮಧ್ಯಪ್ರದೇಶ್ ರಾಷ್ಪ್ರಭಾಷಾ ಸಮಿತಿ ಭೂಪಾಲ್ ಇವರ “ಲೇಟ್ ಹಜಾರಿ ಲಾಲ್ ಜೈನ್ ಸ್ಮ್ರುತಿಸಮ್ಮಾನ್” 2001-2002ರಲ್ಲಿ “ಕನ್ನಡ್ ಕಿ ಪ್ರತಿನಿಧಿ ಕಹಾನಿಯಾO’ ಕಥಾ ಸಂಕಲನಕ್ಕೆ ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಮಾನವ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರ ಇದರ ಅನುವಾದ ಪ್ರಶಸ್ತಿ, 2005ರಲ್ಲಿ “ಭೀಷ್ಮಸಹಾನಿಯವರ ಪ್ರಾತಿನಿಧಿಕ ಕಥೆಗಳು’ ಅನುವಾದಿತ ಕಥಾ ಸಂಕಲನಕ್ಕೆ ವಿಶ್ವೇಶ್ವರಯ್ಯ ಅನುವಾದ ಸಾಹಿತ್ಯ ಪ್ರಶಸ್ತಿ 2007ರಲ್ಲಿ “ಹಳದಿ ಹೂವು” ಅನುವಾದಿತ ಕಥಾ ಸಂಕಲನಕ್ಕೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ 2009ರಲ್ಲಿ ಭೀಷ್ಮ ಸಹಾನಿಯವರ ಪ್ರಾತಿನಿಧಿಕ ಕಥಾ ಸಂಕಲನಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿದೊರಕಿದೆ.
ಅನುವಾದಕ್ಕೂ ಸೃಜನಶೀಲ ಸ್ಪರ್ಶವನ್ನು ನೀಡಿರುವ ಡಿ.ಎನ್. ಶ್ರೀನಾಥ್ ರವರು ಪ್ರಸಕ್ತ ಶಿವಮೊಗ್ಗೆಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಹಿಂದಿ ಮತ್ತು ಕನ್ನಡ ಮನಸ್ಸುಗಳನ್ನು ಬೆಸೆಯುವ ಮಹತ್ವದ ಕೆಲಸವನ್ನು ನಿಷ್ಠೆ ಮತ್ತು ಕಾಳಜಿಯಿಂದ ನಿರ್ವಹಿಸುತ್ತಿರುವ ಶ್ರೀನಾಥ್ ರವರು ಕನ್ನಡಕ್ಕೆ ಅನುವಾದಿಸಿದ ಹಿಂದಿಯ ಪ್ರಸಿದ್ಧ ಲೇಖಕ ಆಬಿದ್ ಸುರತಿಯವರ ‘ಲಬಂಗಿ’ ಎಂಬ ಕೃತಿಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿಯು, ಪ್ರಕಟಿಸುವುದರ ಮೂಲಕ ಅವರಿಗೆ ತನ್ನ ಅಭಿನಂದನೆಯನ್ನು ಸಲ್ಲಿಸುತ್ತಿದೆ.
ಕೆ.ಸಿ. ದಾಕ್ಷಾಯಣಿ
ಪ್ರಾಧ್ಯಾಪಕರು
ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ವಿದ್ಯಾಲಯ
ಶಿವಮೊಗ್ಗ
Book Details
- Stories 1
- Quizzes 0
- Duration 50 hours
- Language English