ತೀರ – ಆತ್ಮಕಥೆ- Theera

ಮುನ್ನುಡಿ
ಬಾಲ್ಯವೆಂಬುದು ಬಹುತೇಕ ಇಲ್ಲ ಎಂಬಂತೆಯೇ ಬೆಳೆದ ನನಗೆ ನನ್ನ 14ನೇ ವರ್ಷದಲ್ಲಿ ಶಿಕ್ಷಕ ತರಬೇತಿಯ ಮೂಲಕ ಆರಂಭವಾದ ಶಿಕ್ಷಕ-ಶೈಕ್ಷಣಿಕ ಜೀವನವೇ ಬಾಲ್ಯವಾಗಿತ್ತು. ಬಾಲ್ಯದಂತೆಯೇ ಅದು ಸುಖದಿಂದಲೂ ದುಃಖದಿಂದಲೂ ಕೂಡಿತ್ತು. `ತೀರ’ವನ್ನು ಕಾದಂಬರಿಯೆಂದು ಪರಿಗಣಿಸಿದರೂ ಆಗಬಹುದು, ಅಥವಾ ಯಾವ ಪ್ರಕಾರಕ್ಕೂ ಸೇರದ ಒಂದು ಕೃತಿ ಎಂದು ಪರಿಗಣಿಸಿದರೂ ಆಗಬಹುದು. ವಾಸ್ತವದಲ್ಲಿ, ಇದು ನನ್ನ ಖಿಜ ಃುಟುಟಿರಣಚಿಟ ಒಚಿಣಜಡಿ (ಇಂಗ್ಲಿಷ್-ಕನ್ನಡ ಉಭಯ ಭಾಷಾಧ್ಯಯನ) ಮತ್ತು ಕಚಿಡಿಜಟಿಣ ಚಿ ಇಜಣಛಿಚಿಣಠಢಿ (ಗುರುಗಳಾಗಿ ತಾಯಿತಂದೆಯರು) ಮತ್ತು ‘ಉತ್ಕೃಷ್ಟತೆಗಾಗಿ ತಾಯಿತಂದೆ’ ಕೃತಿಗಳಂತೆಯೇ ಇದರಲ್ಲಿನ ಮುಖ್ಯ ವಿಚಾರ ಸೆಲೆ ಶಿಕ್ಷಣ.
ನಾನು ಬದುಕಿ ಉಳಿದು ಇದನ್ನು ಬರೆಯಲು ಸಾಧ್ಯವಾಗಿಸಿದ ಮತ್ತು ನನ್ನ ಮನಸ್ಸನ್ನು ಅರಳಿಸಿದ ಎಲ್ಲಾ ವ್ಯಕ್ತಿಗಳಿಗೆ ಮತ್ತು ಪ್ರಪಂಚಕ್ಕೆ ನಾನು ಕೃತಜ್ಞನಾಗಿದ್ದೇನೆ. ಒಂದು ತುತ್ತು ಅನ್ನ ಅಥವಾ ಒಂದಾಣೆ (ಈಗಿನ 6 ಪೈಸೆ) ಇತ್ತ ಯಾರನ್ನೂ ನಾನು ಮರೆತಿಲ್ಲ; ಮರೆಯಲಾರೆ. ಮನುಷ್ಯನನ್ನು ಮನುಷ್ಯನನ್ನಾಗಿಸಲು ನೋವಿನ ಅಥವಾ ಕೆಟ್ಟ ಅನುಭವದ ಪಾಠಗಳು ಅಗತ್ಯ ಎಂದು ನಾನು ಭಾವಿಸುವುದಿಲ್ಲ. ಸಿದ್ಧಾರ್ಥನನ್ನು ಬುದ್ಧನನ್ನಾಗಿಸಿದ್ದು ಅವನ ಸಂವೇದನಾಶೀಲತೆ; ಕೆಟ್ಟ ಪಾಠಗಳಲ್ಲ್ಲ. ಬುದ್ಧನ ಬಾಲ್ಯ ಮತ್ತು ಯೌವನದಲ್ಲಿ ಕೆಟ್ಟ ಅಥವಾ ದುಃಖದ ಪಾಠಗಳಿರಲಿಲ್ಲ. ಕೆಟ್ಟ ಪಾಠಗಳಿಂದ ಮನುಷ್ಯ ಕೆಟ್ಟವನಾಗುವ ಅಥವಾ ಒಳ್ಳೆಯವನಾಗುವ ಎರಡು ಸಾಧ್ಯತೆಗಳೂ ಇವೆ. ಪೆಟ್ಟು ತಿನ್ನದೆಯೂ ಪೆಟ್ಟು ತಿಂದವನಿಗಿಂತ ಹೆಚ್ಚು ಗಾಢವಾಗಿ ನೋವನ್ನು ಅರ್ಥಮಾಡಿಕೊಳ್ಳಬಲ್ಲವರು ಪ್ರಪಂಚದಲ್ಲಿ ಇದ್ದಾರೆ. ಆದ್ದರಿಂದಲೇ ಈ ಜಗತ್ತು ನಮಗೆ, ‘‘ಪರವಾಗಿಲ್ಲ, ಬದುಕಬಹುದು’’ಎಂದನಿಸುವಷ್ಟು ಸಹನೀಯವಾಗಿರುವುದು.
ನನಗೆ ಜಗತ್ತನ್ನು ಅರ್ಥಮಾಡಿಕೊಳ್ಳಲು ಅದು ನನಗೆ ಎಷ್ಟು ನೋವು ಕೊಟ್ಟಿತ್ತೋ ಅಷ್ಟು ನೋವಿನ ಅಗತ್ಯ ಇರಲಿಲ್ಲ. ಕೇವಲ ನೋವುಗಳಿಂದಾಗಿ ನನಗೆ ಜಗತ್ತು ಅರ್ಥವಾಗಲೂ ಇಲ್ಲ. ನನಗೆ ಇನ್ನೇನೋ ಅರ್ಥ ಮಾಡಿಕೊಳ್ಳಬಹುದಾಗಿತ್ತು; ಅದಕ್ಕೆ ಈ ನೋವು ಅಡ್ಡಿಯಾಯಿತು ಎಂಬ ಭಾವ ಕೂಡ ನನ್ನಲ್ಲಿಲ್ಲದಿಲ್ಲ. ಆದ್ದರಿಂದಲೇ ಬದುಕಿನಲ್ಲಿ ಇಷ್ಟೊಂದು ಕೆಟ್ಟ ಪಾಠಗಳಿರಬಾರದಾಗಿತ್ತು ಎಂಬ ಭಾವನೆ ನನ್ನಲ್ಲಿ ಬಲವಾಗಿದೆ. ಮುಖ್ಯವಾಗಿ, ನೋವು ಮತ್ತು ಕೆಟ್ಟ ಪಾಠಕ್ಕೆ ಕಾರಣರಾದದ್ದು ನನಗೆ ಶಿಕ್ಷಕರೇ ಹೊರತು, ಅಪ್ಪ ಅಮ್ಮ ಅಲ್ಲ. ನನಗೆ ಸಿಕ್ಕಿದ ಶಿಕ್ಷಕರು ಕೂಡ ಐದನೇ ತರಗತಿಯ ತನಕ ಒಬ್ಬ; (ನಾನು `ತೀರ’ದಲ್ಲಿ ಆತನನ್ನು ಬೆಳದಿಂಗಳ ರಾಕ್ಷಸ ಎಂದು ಕರೆದಿದ್ದೇನೆ) ಆತನ ನೆನಪು ಬಂದರೆ ನನಗೆ ಈಗಲೂ ನನ್ನ ಕಣ್ಣಲ್ಲಿ ನನಗೇ ಕಾಣಿಸದ ದುಃಖದ ಕಣ್ಣೀರು ಬರುತ್ತದೆ.
ಆದ್ದರಿಂದಲೇ ಯಾವ ವಿದ್ಯಾರ್ಥಿಗೂ ಕೆಟ್ಟ ಪಾಠಗಳಿರಬಾರದು ಎಂಬುದು ಶಿಕ್ಷಣದ ಕುರಿತಾಗಿ ನನ್ನಲ್ಲಿರುವ ಮುಖ್ಯ ವಿಚಾರ. ಆದ್ದರಿಂದಲೇ ನನ್ನ ಬದುಕಿನಲ್ಲಿ ಕೆಟ್ಟ ಪಾಠಗಳಿಗೆ ಕಾರಣನಾದ ಕೂಡ್ಲಿನ ‘ಬೆಳದಿಂಗಳ ರಾಕ್ಷಸ’ನಿಂದ ತೊಡಗಿ, ಶಿಕ್ಷಕ ತರಬೇತಿ ಶಾಲೆಯ ದುಷ್ಟ ಶಿಕ್ಷಕ(ಗುರು ರಾಕ್ಷಸ)ನ ವರೆಗೆ ಮತ್ತು ಅನಂತರ, ವಯಸ್ಸಿನಲ್ಲಿ ತುಂಬಾ ಚಿಕ್ಕವನಾದ ನನ್ನನ್ನು ಹಿಂಡಿ ಹಿಪ್ಪೆ ಮಾಡಿ ಮುಗಿಸಲೆತ್ನಿಸಿದ, ವಯಸ್ಸಿನಲ್ಲಿ ಹಿರಿಯ ಸಹೋದ್ಯೋಗಿಗಳಾಗಿ ನನಗೆ ಸಿಕ್ಕ ಕೆಟ್ಟ ಶಿಕ್ಷಕರಲ್ಲಿ ಈಗ ಎಲ್ಲೋ ಒಬ್ಬಿಬ್ಬರು ಈಗ ಜೀವಂತವಾಗಿರಬಹುದು. ಅವರು ಸತ್ತಿರಲಿ ಬದುಕಿರಲಿ, ಅವರನ್ನು ನಾನು ಹೇಗೆ ಕ್ಷಮಿಸಲಿ? ನಾನು ಯಾರನ್ನೂ ಕ್ಷಮಿಸಲಾರೆ. ಆದರೆ ಅವರ ನೆನಪು ಬೇಡವೆಂದು ಮರೆಯಬಲ್ಲೆ. ಆದರೆ ನೆನಪಿಗೆ ತರಬೇಕಾದ ಕಾರಣವಿದ್ದರೆ ಹೀಗೆ, ಎಲ್ಲವೂ ಚಿತ್ರ ಚಿತ್ರವಾಗಿ ನೆನಪಿನಲ್ಲಿ ಮೂಡಿ ತುಸು ಹೊತ್ತು ಇದ್ದು ಹೋಗುತ್ತದೆ. ರಾಕ್ಷಸರ ಹಿಂಡಿನಲ್ಲಿ ನನಗೆ ಕೆಲವು ದೇವತೆಗಳು ಸಿಕ್ಕಿದ್ದಾರೆ; ಅವರ ನೆನಪು ಆದಾಗ ಅದೃಶ್ಯವಾದ ಸುಖದ ಕಣ್ಣೀರು ಬರುತ್ತದೆ. ಎಲ್ಲವೂ ಐವತ್ತು ಅರವತ್ತು ವರ್ಷಕ್ಕೂ ಹಿಂದಿನ ಸಂಗತಿಯಾದುದರಿಂದ, ರಾಕ್ಷಸರು ಮತ್ತು ದೇವತೆಗಳಲ್ಲಿ ಯಾರೂ ಜೀವಂತವಾಗಿಲ್ಲವಾದುದರಿಂದ ನೆನಪುಗಳು ಅರ್ಥಹೀನ. ಆದರೆ ಅನುಭವ ಅರ್ಥಹೀನವೆನಿಸುವುದಿಲ್ಲ. ಹಾಗಿದ್ದರೂ ಸಂತೋಷದ ಕಣ್ಣೀರಿಗೆ ಅರ್ಥವಿದೆ ಎಂದನಿಸುತ್ತದೆ.
ಆತ್ಮಕಥೆಯಲ್ಲಿ ಕೂಡ `ನಾನು’ ಎಂಬ ಭಾವ ನನಗೆ ಮುಖ್ಯವಲ್ಲ. ಅನುಭವದ ವಿಶ್ಲೇಷಣೆ, ಪುನರ್ವಿಮರ್ಶೆ ಮುಖ್ಯ. ಆದ್ದರಿಂದ ಬರಹ ರೂಪದ ನನ್ನ ಮಾತುಗಳಲ್ಲಿ ‘ನಾನು’ ಎಂಬುದು ಒಂದು ಆತ್ಮಪ್ರತಿಮೆ ಮಾತ್ರ. ಎಷ್ಟೋ ಸಲ ಈ ‘ನಾನು’ ಎಂಬುದರಲ್ಲಿ ಅದನ್ನು ಅಪ್ಪಿ ಹಿಡಿದುಕೊಂಡಿರುವ ದೇವತಾಸ್ವರೂಪಿಗಳು ಕೂಡ ಇರುತ್ತಾರೆ. ಅವರು ನೆನಪಿನಲ್ಲಿ ದೀಪವಾಗಿ ಬೆಳಕು ಕೊಡುತ್ತಿರುತ್ತಾರೆ. ಅದು ಬೇಕು ಎಂದರೆ ಎಲ್ಲರಿಗೂ ದೊರೆಯುವಂಥ ದೃಷ್ಟಿಯೇ ಆಗಿರುತ್ತದೆ. ಅನ್ಯಾಯ ನನಗೆ ಆಗಲಿ, ಬೇರೆಯವರಿಗೆ ಆಗಲಿ; ಅನ್ಯಾಯ ಅನ್ಯಾಯವೇ ಅಲ್ಲವೆ? ಒಂದು ವೇಳೆ, ಆತ ಅಧರ್ಮಿ, ಪಾಪಿ ಎಂದು ನನ್ನಿಂದ ತೀರ್ಮಾನಿಸಲಾಗದಿದ್ದರೆ, ಮರೆವೆಯೇ ಲೇಸಲ್ಲವೆ? ಅದರೆ ನನ್ನ ಕಣ್ಣ ಮುಂದೆಯೇ ಅನ್ಯಾಯಕ್ಕೆ ನೂರು ಆಧಾರವಿದ್ದರೆ, ಯಾಕೆ ಕ್ಷಮಿಸಬೇಕು, ಕ್ಷಮಿಸುವುದಕ್ಕೇನರ್ಥ? ‘ಕ್ಷಮಿಸಿ’ ಎನ್ನುವ ಮಾತು, ‘ಕ್ಷಮಿಸಿದ್ದೇನೆ’ ಎನ್ನುವ ಮಾತು ಕೇವಲ ಬಾಯಿ ಮಾತಾಗಿದ್ದು, ಆಂತರ್ಯದಲ್ಲಿ ಅದು ಶಾಶ್ವತವಾಗಿ ‘ಅಕ್ಷಮ್ಯ’ವೆಂದು ದಾಖಲಾಗಿದ್ದರೆ, `ಕ್ಷಮೆ’ಯ ಮಾತು ಅರ್ಥಹೀನ. ಹಾಗಿದ್ದರೆ ಅಂಥ ಮಾತುಗಳಾದರೂ ಯಾಕೆ? ಆದ್ದರಿಂದ ಆಂಥದನ್ನೆಲ್ಲ ಕ್ಷಮಿಸದೇನೇ ಸಂತೋಷದಿಂದ ಗೋರಿಯೊಳಗೆ ಹೋಗಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಪ್ರಚೋದನೆಯಿಲ್ಲದೆ ಗುಂಡು ಹಾರಿಸಿ ಕೊಲ್ಲುವ ಶತ್ರುವನ್ನು ಕ್ಷಮಿಸಬೇಕು ಎಂದು ಸೈನಿಕ ನಂಬುವುದಾದರೆ ದೇಶವನ್ನು ಅವನಿಗೇ ಬಿಟ್ಟು, ಅವನ ಗುಲಾಮನಾಗುವುದು ಅನಿವಾರ್ಯವಾದೀತು. ಅಥವಾ ಸಾವೇ ಕ್ಷಮೆಯೆಂದಾದೀತು.
ಯಾರದೋ ಪ್ರೀತಿ ನಷ್ಟವಾಗುತ್ತದಲ್ಲಾ ಎಂಬ ವಾಂಛೆಯಿಂದ ‘ಕ್ಷಮಿಸಿದ್ದೇನೆ’ ಎಂದು ಹೇಳಿ, ಸುಳ್ಳು ಮಹಾತ್ಮನಾಗುವುದಕ್ಕಿಂತ, ಕ್ಷಮಿಸದೆ, ಇರಲಾಗುವಂತೆ ಇದ್ದು, ಬದುಕಲಾಗುವಂತೆ ಬದುಕಿ, ಸಾಯುವ ಕಾಲ ಬಂದಾಗ, ‘ನಿಜವಾಗಿಯೂ ಬದುಕಿದೆ’ ಎಂಬ ಭಾವದಲ್ಲಿ ಸಾಯುವುದರಲ್ಲಿ ಸುಖವಿದೆ ಎಂದು ಭಾವಿಸುತ್ತೇನೆ. ಇರುವುದೆಲ್ಲ ಇಲ್ಲಿಯೇ ಬೇರೆಲ್ಲೂ ಇಲ್ಲ. ನಾವಿರುವುದು ಈಗ ನಮಗಿರುವ ಇದ್ದೇನೆ ಎಂಬ ಸ್ಮರಣೆಯಲ್ಲಿಯೇ. ಕ್ಷಮಿಸಲಾಗದಿದ್ದರೂ ಪ್ರೀತಿಸಲು ಸಾಧ್ಯವಿದೆ ಅಥವಾ ದ್ವೇಷಿಸದಿರಲು ಸಾಧ್ಯವಿದೆ. ಪುನರ್ಜನ್ಮದಲ್ಲಿ ಪರಿತಾಪ ಪಡಬೇಕಾದೀತೆಂಬ ಭಯವೇನೂ ಇಲ್ಲ. ಯಾಕೆಂದರೆ ಯಾವ ಜನ್ಮವನ್ನೂ ಪುನರ್ಜನ್ಮವೆಂದು ತಿಳಿಯಲು ಯಾರಿಗೆ ಯಾರ ಅಡ್ಡಿ? ಯಾವ ಜನ್ಮದಲ್ಲಿಯೂ ಪುನರ್ಜನ್ಮದ ಸ್ಮರಣೆ ಇರುವುದಿಲ್ಲವಲ್ಲ? ಇತರರ ಕಾಲಿಗೆರಗುವ ಮಂದಿ, ಇತರರನ್ನು ತಮ್ಮ ಕಾಲಿಗೆರಗಿಸುವ ಮಂದಿ ಕೂಡ ಒಂದು ಸ್ಮರಣೆಯಿಲ್ಲದ ಬಿಂದುವಿನಲ್ಲಿ ಅಂತ್ಯಗೊಳ್ಳುತ್ತಾರೆ. ವಾಸ್ತವದಲ್ಲಿ, ಇರುವ ಒಂದು ಬದುಕಿನಲ್ಲಿಯೇ ಸ್ಮೃತಿಹೀನರಾಗಿ ಬದುಕಲು ಸಾಧ್ಯ ಎಂಬುದಕ್ಕೆ ಇಂಥವರು ನಿದರ್ಶನವಾಗಿರುತ್ತಾರೆ. ಈಗಿರುವ ಜನ್ಮವನ್ನೇ ಒಂದು ಪುನರ್ಜನ್ಮ ಅಥವಾ ಇನ್ನೊಂದು ಪುನರ್ಜನ್ಮದ ಕನಸಿನ ಬದುಕು ಎಂದು ತಿಳಿಯಬಹುದೇನೊ!
ನೆನಪುಗಳು ಅಸಂಖ್ಯ. ಮತ್ತೆ ಮತ್ತೆ ಚಿಗುರುವ ನೆನಪು ಎಂಬ ವಿಸ್ಮಯದಲ್ಲೇ ಬದುಕು ಮತ್ತು ಪುನರ್ಜನ್ಮ ಎರಡೂ ಇರುವುದು. ಒಂದಕ್ಕೊಂದು ಮೆತ್ತಿಕೊಂಡು ಉಸಿರಿರುವ ತನಕವೂ ಇರುವುದು ನೆನಪುಗಳು ಮಾತ್ರ. ಅನುಭವಗಳು ಸಹ ನಮ್ಮಲ್ಲಿ ಉಳಿಯುವುದು ನೆನಪುಗಳಾಗಿಯೇ ತಾನೆ? ಅನುಭವಗಳನ್ನು ಪನರ್ವಿಮರ್ಶಿಸಿಕೊಂಡು ಅಂತಸ್ಸಾಕ್ಷಿಯ ತಟ್ಟೆಯಲ್ಲಿಟ್ಟು ತೂಗುವುದು ವಿಕಾಸಶೀಲವಾದ ಮನಸ್ಸಿನಲ್ಲಿ ನಿರಂತರ ನಡೆಯುವ ಕೆಲಸ. ಇದೇ ಮಾನವೀಯವಾಗಿ ಬದುಕುವ ಪ್ರಯತ್ನ. ಇದಕ್ಕೆ ನಮಗೆ ನೆನಪುಗಳು ಬೇಕೇ ಬೇಕು. ಬದುಕು ಅಂದರೆ ನೆನಪು. ನೆನಪುಗಳ ಸಾವೇ ನಿಜವಾದ ಸಾವು.
‘ತೀರ’ದ ಬಗ್ಗೆ ಒಂದು ಮಾತು ಹೇಳಲೇಬೇಕಾಗಿದೆ. ಮೊದಲ ಮುದ್ರಣಕ್ಕೆ ಕಳಿಸಿದ ಇದೇ ಪ್ರತಿ ವೈವಿಧ್ಯಮಯವಾದ ಹಲವಾರು ತಪ್ಪುಗಳಿಂದ ಮುದ್ರಣಗೊಂಡು ಹೊರಬಂದ ನಂತರ, ಪುಸ್ತಕವನ್ನು ಕೊಂಡುಕೊಂಡವರಲ್ಲಿ ಒಂದಷ್ಟು ಮಂದಿ ನನಗೆ ಫೋನು ಮಾಡಿ, ಪತ್ರ ಬರೆದು, ಮುದ್ರಣದೋಷಗಳು ಮಾತ್ರವಲ್ಲದೆ, ಯಾವುದೋ ಪುಟ ಇನ್ಯಾವುದೋ ಪುಟದೊಂದಿಗೆ ಬೆರಕೆಯಾದುದನ್ನು, ಒಂದೇ ಪುಟ ಎರಡು ಬಾರಿ ಮುದ್ರಣವಾವಾದುದನ್ನು ನನಗೆ ತಿಳಿಸಿದರು. ಈ ವಿಷಯಗಳಲ್ಲಿ ಲೇಖಕ ನಿರಪರಾಧಿ ಮತ್ತು ನಿಸ್ಸಹಾಯಕ ಎಂದು ಎಷ್ಟು ಕಾಲ ಎಷ್ಟು ಮಂದಿಗೆ ಮನವರಿಕೆ ಮಾಡುತ್ತಿರಲು ಸಾಧ್ಯ? ಒಂದಷ್ಟು ಮಂದಿ ಸಹೃದಯ ಓದುಗರು ‘ತೀರ’ ಪುನರ್ಮುದ್ರಣವಾಗುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಆಗಲೂ ನಾನು ನಿಸ್ಸಹಾಯಕನೇ. ಲೇಖಕ ಹೆಚ್ಚೆಂದರೆ ಪ್ರಕಾಶನಾಗಬಹುದು, ಮುದ್ರಕನಾಗುವುದು ಕಷ್ಟ.
ನನ್ನನ್ನು ತೀರಾ ಹತ್ತಿರದಿಂದ ಬಲ್ಲವರೆಲ್ಲರಿಗೆ ‘ತೀರ’ ನನ್ನದೇ ಬದುಕಿನ ಕತೆ ಎಂದು ಗೊತ್ತಿದೆ. ಅವರು ಈಗಲೂ ಇದನ್ನು ಓದಲು ಸಿದ್ಧವಾಗಿದ್ದಾರೆ. ಇಂಥ ಪುಸ್ತಕವನ್ನು ಒಬ್ಬ ಲೇಖಕನಿಂದ ಒಂದು ಸಲ ಮಾತ್ರ ಬರೆಯಲು ಸಾಧ್ಯ ಎಂದು ನನಗೂ ಗೊತ್ತಿದೆ. ಸಹೃದಯ ಓದುಗರಿಗೂ ಗೊತ್ತಿದೆ.
KT GATTI
Book Details
- Stories 4
- Quizzes 0
- Duration 50 hours
- Language ಕನ್ನಡ